ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮೆಲ್ಲರ ಸ್ವತ್ತಾಗಿ ಪರಿವರ್ತಿಸಿ ಜನ-ಸಾಮಾನ್ಯರ ಪರಿಷತ್ತನ್ನಾಗಿಸುವ ಧ್ಯೆಯ ನನ್ನದು. ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಗೌರವ ತರುವ ಕಾರ್ಯ ಮಾಡುವುದರೊಂದಿಗೆ ಪ್ರತಿ ತಾಲೂಕಿನಲ್ಲೂ ಕನ್ನಡ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಿದ್ದೇನೆ ಎಂದು ಕಸಾಪ ರಾಜ್ಯ ಅಧ್ಯಕ್ಷ ಸೇವಾಕಾಂಕ್ಷಿ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.
ಸೋಮವಾರ ಕಾರ್ಕಳಕ್ಕೆ ಭೇಟಿ ನೀಡಿದ ಅವರು ಕಾರ್ಕಳ ಸಾಹಿತ್ಯ ಪರಿಷತ್ ಪದಾಧಿಕಾರಿಗಳೊಂದಿಗೆ ಹೊಟೇಲ್ ಪ್ರಕಾಶ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಇನ್ನು ಮುಂದೆ ಸಂಪೂರ್ಣ ಪಾರದರ್ಶಕವಾಗಲಿದೆ. ನಾನು ಎಡ, ಬಲ ಅಥವಾ ಯಾವುದೇ ಪಂಥಕ್ಕೆ ಸೇರಿದವನಾಗದೇ ಮಾನವ ಪಂಥದ ಮೌಲ್ಯಗಳಿಗೆ ಕನ್ನಡ ಪಂಥದ ಸೇವಕನಾಗಿ ಕಾರ್ಯನಿರ್ವಹಿಸಿ ದ್ದೇನೆ. ಮುಂದೆಯೂ ಹಾಗೆಯೇ ಇರಲಿದ್ದೇನೆ ಎಂದ ಮಹೇಶ್ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಡಾ. ಮಂಜುನಾಥ ರೇವಣ್ಣರ್, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಡಾ. ಸುಮತಿ ಪಿ., ಸುಬ್ರಹ್ಮಣ್ಯ ಭಟ್, ಬೇಬಿ ಈಶ್ವರಮಂಗಲ, ಸೂರಾಲು ನಾರಾಯಣ, ಆರ್. ನಾರಾಯಣ ಶೆಣೈ, ಗಣೇಶ್ ಜಾಲ್ಸೂರು, ದೇವದಾಸ್, ವಸಂತ ಎಂ, ಶೇಖರ್ ಅಜೆಕಾರ್, ಧರಣೇಂದ್ರ ಉಪಸ್ಥಿತರಿದ್ದರು.