ಯೋಗೀಶ್ ಸಹ್ಯಾದ್ರಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಆಯ್ಕೆ

ನಿತ್ಯವಾಣಿ,ಚಿತ್ರದುರ್ಗ,(ಮೇ.12) : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಚಿತ್ರದುರ್ಗ ಜಿಲ್ಲೆಯ ನೂತನ ಜಿಲ್ಲಾ ಅಧ್ಯಕ್ಷರಾಗಿ ಉಪನ್ಯಾಸಕ ಹಾಗು ಲೇಖಕ ಯೋಗೀಶ್ ಸಹ್ಯಾದ್ರಿ ಆಯ್ಕೆಯಾಗಿದ್ದಾರೆ ಎಂದು ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ್ ತಿಳಿಸಿದ್ದಾರೆ.
ಗೂಗಲ್ ಮೀಟ್ ಆಪ್ ಮೂಲಕ ರಾಜ್ಯದ ಹಾಗು ಜಿಲ್ಲೆಯ ಸಂಘಟಕರು, ಕಾರ್ಯಕರ್ತರು ಪಾಲ್ಗೊಂಡಿದ್ದ  ಆನ್ಲೈನ್ ವರ್ಚುವಲ್ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ಚಿಂತನೆಗಳನ್ನು ಹೊಂದಿ ಸದ್ದಿಲ್ಲದೆ  ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆ.  ಕಳೆದ ೫೪ ವರ್ಷ( 1966) ಗಳಿಂದ ದೇಶದಲ್ಲಿ ತನ್ನದೇ ಆದ ಸಾಹಿತ್ಯ ಚಟುವಟಿಕೆ ನಡೆಸುತ್ತಿದೆ. ಈ ಭಾರತ ನನ್ನದು, ಈ ಭಾರತದ ಎಲ್ಲ ಭಾಷೆ, ಭಾಗಗಳು ತನ್ನದು ಎಂದು ಭಾವಿಸಿ,  ಭಾರತದ ಸಂಸ್ಕೃತಿ, ಸಾಹಿತ್ಯ ಚಟುವಟಿಕೆಗಳನ್ನು ದೇಶದಲ್ಲಿ ವಿಸ್ತರಿಸುತ್ತಾ, ಪಸರಿಸುತ್ತಾ ಸಾಗಿದೆ.  ಕಳೆದ ನಾಲ್ಕು ವರ್ಷದ ಹಿಂದೆ ಡಾ: ದೊಡ್ಡರಂಗೇಗೌಡರ ನೇತೃತ್ವದಲ್ಲಿ ರಾಜ್ಯದಲ್ಲೂ ಪರಿಷತ್ತು ಆರಂಭಗೊಂಡು ಇದೀಗ ರಾಜ್ಯದಾದ್ಯಂತ 110 ಕ್ಕೂ ಹೆಚ್ಚು ಘಟಕಗಳನ್ನು ಹೊಂದಿದೆ. ಪ್ರಸ್ತುತ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಡಾ: ಪ್ರೇಮಶೇಖರ್ ನೇತೃತ್ವ ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ನಾರಾಯಣ ಶೇವಿರೆ ಮಾತನಾಡಿ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಭಾರತದ ನೆಲದಲ್ಲಿ ವಿಕಾಸಗೊಂಡ ತತ್ತ್ವ, ಸಂಸ್ಕೃತಿಗಳ ಆಧಾರದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಂಘನಾತ್ಮಕವಾಗಿ ಕಾರ್ಯ ಮಾಡುವ ರಾಷ್ಟ್ರವ್ಯಾಪಿ ಸಂಘಟನೆ. ಗೋಷ್ಠಿ, ಸಮ್ಮೇಳನ, ಸಂವಾದ, ಸಾಹಿತ್ಯ ಸಾಧಕರಿಗೆ ಸಮ್ಮಾನ ಇತ್ಯಾದಿ ಸಾಹಿತ್ಯಸಂಬಂಧೀ ಕಾರ್ಯಕ್ರಮಗಳ ಆಯೋಜನೆ; ಹೊಸಪೀಳಿಗೆಯ ಸಾಹಿತಿಗಳ ಕಮ್ಮಟ; ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸ ಬಯಸುವವರಿಗೆ ಪ್ರಶಿಕ್ಷಣ; ಸಾಹಿತ್ಯ ಕಾರ್ಯಕರ್ತರಿಗೆ ಅಭ್ಯಾಸ ವರ್ಗ;  ಸಾಹಿತಿಗಳು, ಸಾಹಿತ್ಯಾಸಕ್ತರನ್ನು ಒಳಗೊಂಡ ಸ್ಥಾನೀಯ ಘಟಕಗಳ ಸಂರಚನೆ; ಸಾಹಿತಿಗಳ ಸಂಪರ್ಕ, ಸಂವಾದ – ಹೀಗೆ ವಿಧವಿಧ ಕಾರ್ಯಕ್ರಮಗಳ ಮೂಲಕ ಅಭಾಸಾಪ ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಯರತವಾಗಿದೆ ಎಂದು ನುಡಿದರು.
ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ, ಜಿಲ್ಲೆಯ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿಯೂ ಅಭಾಸಾಪ ಸಮಿತಿಗಳನ್ನು ರಚಿಸಿ ರಾಜ್ಯ ಘಟಕದ ಸಹಕಾರದೊಂದಿಗೆ ಯುವ ಉತ್ಸಾಹಿ ಸಾಹಿತಿಗಳನ್ನು ಪ್ರೋತ್ಸಾಹಿಸಹಾಗುವುದು ಮತ್ತು ಚಿತ್ರದುರ್ಗ ಜಿಲ್ಲೆಯನ್ನು ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ತಂಡದ ಸಹಕಾರದಿಂದ ಶ್ರಮಪಡುತ್ತೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗೀಯ ಸಂಯೋಜಕಿ ಶ್ರೀರಂಜಿನಿ ದತ್ತಾತ್ರೇಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುರಾಜ್ ಕುಂದಾಪುರ, ಅಭಾಸಾಪ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published.