ನಿತ್ಯವಾಣಿ ,ಚಿತ್ರದುರ್ಗ,( ಜ.14) : ಚಿತ್ರದುರ್ಗ ನಗರದ ಬಸವ ಮಂಟಪದಲ್ಲಿ 35ನೇ ಶರಣಮೇಳ ಉತ್ಸಾಹದಿಂದ ನೆರವೇರಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮ, “ಬಸವ ಧರ್ಮ ಸಂಸ್ಥಾಪನಾ ದಿನ”ದ ಅಂಗವಾಗಿ 11 ಗಂಟೆಗೆ ವಿಶೇಷ ಸಾಮೂಹಿಕ ಪ್ರಾರ್ಥನೆಯು ನಡೆಯಿತು. ನಂತರ 108 ವಚನಗಳ ಅಖಂಡ ವಚನ ಪಠಣ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶರಣರಾದ ವೀರೇಶ್ ಅಧ್ಯಕ್ಷರು ರಾಷ್ಟ್ರೀಯ ಬಸವದಳ ಕರ್ನಾಟಕ ರಾಜ್ಯ, ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಶರಣರಾದ ಮನೋಹರ್, ಅಧ್ಯಕ್ಷರು, ರಾಷ್ಟ್ರೀಯ ಬಸವದಳ, ಚಿತ್ರದುರ್ಗ ಇವರು ನೆರವೇರಿಸಿದರು.
ಪ್ರತಿ ವರ್ಷ ದೇಶದ ಮೂಲೆ ಮೂಲೆಗಳಿಂದ ಮತ್ತು ವಿದೇಶಗಳಿಂದ ಲಕ್ಷಾಂತರ ಲಿಂಗಾಯತ ಧರ್ಮೀಯರು ಮತ್ತು ಬಸವ ತತ್ವ ಪ್ರಿಯರು, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಶರಣಮೇಳದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಕಾರಣದಿಂದಾಗಿ ಆಯಾ ಜಿಲ್ಲೆಗಳಲ್ಲಿಯೇ ಶರಣಮೇಳ ಕಾರ್ಯಕ್ರಮ ನಡೆಸುವಂತೆ ಬಸವ ಧರ್ಮ ಪೀಠ, ಕೂಡಲ ಸಂಗಮದಿಂದ ಆದೇಶವಾಗಿದ್ದರಿಂದ ಈ ಬಾರಿ ಆಯಾ ಜಿಲ್ಲೆಗಳಲ್ಲಿಯೇ ಶರಣಮೇಳ ಕಾರ್ಯಕ್ರಮ ನಡೆಸಲಾಯಿತು. ಚಿತ್ರದುರ್ಗದಲ್ಲಿ ನಡೆದ ಶರಣಮೇಳ ಕಾರ್ಯಕ್ರಮದಲ್ಲಿ ಸ್ಥಳೀಯ ಶರಣರು ಮತ್ತು ಜಿಲ್ಲೆಯ ವಿವಿಧ ಗ್ರಾಮಗಳಿಂದಲೂ ನೂರಾರು ಶರಣರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶರಣರಾದ ವೀರೇಶ್ ರಾಷ್ಟ್ರೀಯ ಬಸವ ದಳ, ಕರ್ನಾಟಕ ರಾಜ್ಯ, ಶರಣರಾದ ಮನೋಹರ್ ರಾಷ್ಟ್ರೀಯ ಬಸವದಳ, ಚಿತ್ರದುರ್ಗ ಘಟಕ, ಶರಣರಾದ ಶಂಕರಪ್ಪ, ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಲಿಂಗಾಯತ ಸಮಾಜ, ಶರಣ ಶ್ರೀನಿವಾಸ್, ಅಧ್ಯಕ್ಷರು, ಯುವ ರಾಷ್ಟ್ರೀಯ ಬಸವದಳ, ಚಿತ್ರದುರ್ಗ, ಶರಣ ಕಲ್ಮೇಶ್, ನಿರ್ದೇಶಕರು, ನವಕರ್ನಾಟಕ ಬ್ಯಾಂಕ್, ಚಿತ್ರದುರ್ಗ ಮತ್ತು ಚಿತ್ರದುರ್ಗ ರಾಷ್ಟ್ರೀಯ ಬಸವದಳದ ಸಂಘಟಕರಾದ ಶರಣೆ ಅಕ್ಕಮಹಾದೇವಿ ತಿಪ್ಪೇಸ್ವಾಮಿ, ವೀರಮ್ಮ ನಾಗರಾಜು ಹಾಗೂ ವೀಣಾ, ಹಿರೇಹಳ್ಳಿ, ತಿಮ್ಮರಾಜು ಭಾಗವಹಿಸಿದ್ದರು.