ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಯುವಶಕ್ತಿಯನ್ನು ಮಾನವೀಯ ತುಡಿತದ ಕಡೆಗೆ ಕರೆದುಕೊಂಡು ಹೋಗುವ ಉದ್ದೇಶ ಇನ್ನೊಂದು ಸಂಘಟನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ಮಾ. 13 (ಹಿ.ಸ): ಹಲವಾರು ಸಂಘಟನೆಗಳು ಇದ್ದಾಗ್ಯು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಯುವಶಕ್ತಿಯನ್ನು ಮಾನವೀಯ ತುಡಿತದ ಕಡೆಗೆ ಕರೆದುಕೊಂಡು ಹೋಗುವ ಉದ್ದೇಶ ಇನ್ನೊಂದು ಸಂಘಟನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಎಲ್ಲರ ಅಭಿಪ್ರಾಯದ ಮೇರೆಗೆ ದಿ. 14-3-21ರಂದು ಶರಣ ಸೇನೆ ಸಂಘಟನೆಗೆ ಚಾಲನೆ ನೀಡಲಾಗುತ್ತಿದೆ. ಈ ಸಂಘಟನೆಯಲ್ಲಿ ಯುವಕರು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಸಂಘಟನೆ ಮಾಡುತ್ತ ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.

ಕ್ರಿಸ್ತ ಪೂರ್ವದಲ್ಲಿ ಸಾಕ್ರೆಟಿಸ್ ಅವರು ಜಗತ್ತು ಕಂಡಂತಹ ಅಪ್ರತಿಮ ವಿಚಾರವಾದಿ. ತನ್ನ ವಿಚಾರಗಳನ್ನು ಜನಸೇರುವ ಕಡೆಯಲ್ಲಿ ಪ್ರಚಾರಪಡಿಸುತ್ತಿದ್ದು, ಕೆಲಯುವಕರು ಇವರ ವಿಚಾರಗಳಿಂದ ಆಕರ್ಷಿತರಾಗುತ್ತಾರೆ. ತನ್ನ ಅದ್ಭುತ ವಿಚಾರಶಕ್ತಿಯಿಂದ ಪ್ರಜಾರಾಜ್ಯ ಸ್ಥಾಪನೆ ಆಗಬೇಕೆಂಬ ಆಶಯ ಅವನದಾಗಿತ್ತು. ಪ್ರಭುಸತ್ತೆಯು ಎಸಗುತ್ತಿದ್ದಂತಹ ಅಮಾನವೀಯ ಕ್ರಮಗಳನ್ನು ಸಾಕ್ರೆಟಿಸ್ ಧೈರ್ಯವಾಗಿ ಖಂಡಿಸುತ್ತಿದ್ದ. ಟೀಕೆ-ಟಿಪ್ಪಣಿಗಳಿಗಾಗಿ ಆತ ಏನೆಲ್ಲ ಸಂಕಷ್ಟ ಎದುರಿಸಬೇಕಾಯಿತು. ಆತ ಸಾಯುವ ಸಂದರ್ಭದಲ್ಲಿ ಗೆಳೆಯರೊಟ್ಟಿಗೆ ಹಂಚಿಕೊಂಡ ಕೊನೆಯ ಅನಿಸಿಕೆ- ಪ್ರಜಾಸತ್ತೆಗಾಗಿ ಹೋರಾಡಿದ ನನ್ನ ಕ್ರಮಗಳನ್ನು ಸಂತರು ಸತ್ಪುರುಷರು ಒಪ್ಪಿಕೊಂಡರೆ ಸಾಕು: ನನಗದೆ ಗೌರವ. 12ನೇ ಶತಮಾನದ ವಚನ ಚಳವಳಿಯ ನೇತಾರ ಬಸವಣ್ಣನವರು- `ಆನು ಒಲಿದಂತೆ ಹಾಡುವೆ’ ಎನ್ನುವುದರ ಮುಖಾಂತರ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದ ಮುಕ್ತ ವಿಚಾರವಾದಿ. ಶರಣಸಂಕುಲ ನಡೆಸಿದಂತಹ ಸಮಸಮಾಜದ ಪರಿಕಲ್ಪನೆಯನ್ನು ಹೊಸಕಿ ಹಾಕಲು ಪಟ್ಟಭದ್ರ ಹಿತಾಸಕ್ತರು ಶರಣರ ಮೇಲೆ ದೌರ್ಜನ್ಯ ಎಸಗಿದರು. ಮುಂಚೂಣಿ ನಾಯಕರಾದ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸಿದರು. ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದಂತಹ ಗಾಂಧೀಜಿಯವರಿಗೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಯಿತು. ಏಸುಕ್ರಿಸ್ತರು ಶಿಲುಬೆಗೆ ಏರಿಸಲ್ಪಟ್ಟರು. ಸಾಕ್ರೆಟಿಸ್‍ಗೆ ವಿಷಪ್ರಾಶನ ಮಾಡಿಸಲಾಯಿತು. ಹೀಗೆ ತಮ್ಮ ಬದುಕನ್ನು ಬಲಿಕೊಟ್ಟು ಆದರ್ಶಗಳನ್ನು ಎತ್ತಿಹಿಡಿದ ದಾರ್ಶನಿಕರು ಭೌತಿಕವಾಗಿ ಕಣ್ಮರೆ ಆಗಿರಬಹುದು. ಅವರು ನಡೆಸಿದ ಚಿಂತನೆಗಳು ಮತ್ತು ಪ್ರಯೋಗಗಳು ಮಾತ್ರ ಜಗತ್ತಿಗೆ ಇಂದಿಗೂ ಮಾರ್ಗದರ್ಶನ ಮಾಡುತ್ತಿವೆ. ಇಂದಿಗು ಅವು ಮುಂದುವರಿದಿವೆ. ಶ್ರೀಮಠದ ಪ್ರಯೋಗಶೀಲತೆ, ಅಭಿವೃದ್ಧಿ, ಸಾಮಾಜಿಕ ಸುಧಾರಣೆಯನ್ನು ಸಹಿಸಲಾರದ ದುಷ್ಟಶಕ್ತಿಗಳು ಒಂದಿಲ್ಲೊಂದು ಚಿತಾವಣೆ ಮಾಡುತ್ತ ವ್ಯವಸ್ಥೆಯನ್ನು ಅಭದ್ರಗೊಳಿಸಲು ಯತ್ನಿಸುತ್ತಿವೆ. ಪ್ರತಿಹಂತದಲ್ಲಿ ದಿಟ್ಟತನದಿಂದ ಅವುಗಳ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಅಂಥ ಶಕ್ತಿಗಳನ್ನು ಹಿಮ್ಮೆಟ್ಟಿಸುತ್ತ ಬರಲಾಗಿದೆ. ಸಂಘಟನೆ ಮುಖಾಂತರ ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು `ಶರಣ ಸೇನೆ’ ಎಂಬ ಸಂಘಟನೆ ತಲೆಯೆತ್ತಿದೆ. ಆಯಾ ದಾರ್ಶನಿಕರನ್ನು ಸತಾಯಿಸಿದವರು ಆಯಾ ಜನಾಂಗದವರೇ ಆಗಿದ್ದಾರೆ. ಸ್ವಜಾತಿ ಮಾತ್ರವಲ್ಲ ಯಾವುದೇ ಜನಾಂಗದಲ್ಲು ಅವಹೇಳನಕಾರಿ ವಿದ್ಯಮಾನಗಳು ನಡೆದಲ್ಲಿ ಅಂಥವುಗಳ ವಿರುದ್ಧ ಶರಣ ಸೇನೆಯು ಹೋರಾಡುತ್ತದೆ. ಶರಣ ಸೇನೆಯು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಯಲಿದ್ದು, ಯುವಶಕ್ತಿಗೆ ಸೂಕ್ತ ಮಾರ್ಗದರ್ಶನ ನೀಡುತ್ತ, ಅವರನ್ನು ಸತ್ಪ್ರಜೆಗಳನ್ನಾಗಿಸಲಾಗುತ್ತದೆ. ದಾರ್ಶನಿಕರ ಹಾಗು ಬಸವಾದಿ ಶರಣರು ಸಾರಿದ ಮೌಲ್ಯಗಳನ್ನು ಪುನಃ ಸ್ಥಾಪಿಸಲು ಮತ್ತು ಅವನ್ನು ಮುಂದುವರಿಸುವ ದಿಶೆಯಲ್ಲಿ ಶರಣ ಸೇನೆ ಕಾರ್ಯಪ್ರವೃತ್ತವಾಗಿದೆ ಎಂದರು.

Leave a Reply

Your email address will not be published.