ವ್ಯಕ್ತಿ ಒಂದು ಶಕ್ತಿಯಾಗಬೇಕು. ಧಾರ್ಮಿಕ ಪೀಠಗಳಲ್ಲಿ ಧ್ಯಾನ ಮಾಡುವ ಹಾಗೆ ಯುವಶಕ್ತಿ ಕೇಳಿಸಿಕೊಳ್ಳಬೇಕು :: ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ನಿತ್ಯವಾಣಿ, ಮಾ. 14 : ಜಗತ್ತಿನಲ್ಲಿ ಶಾಶ್ವತವಾದುದು ವಿಚಾರ ಶಕ್ತಿ. ವಿಚಾರಗಳನ್ನು ಕೇಳಿಸಿಕೊಳ್ಳಲಾರದವರು ಸಮಾಜದಲ್ಲಿ ಶಕ್ತಿಯಾಗಲು ಸಾಧ್ಯವಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆದ ಶರಣ ಸೇನೆ ಉದ್ಘಾಟನೆ ಮತ್ತು ಯುವಶಕ್ತಿಯ ಅನಾವರಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಚಿಂತನೆಗಳನ್ನು ನೀಡಿದ ಶ್ರೀಗಳು, ಸಾವಿರಾರು ಜನ ಬಂದಿರುವ ನಿಮಗೆ ಅಭಿನಂದನೆಗಳು. ವ್ಯಕ್ತಿ ಒಂದು ಶಕ್ತಿಯಾಗಬೇಕು. ಧಾರ್ಮಿಕ ಪೀಠಗಳಲ್ಲಿ ಧ್ಯಾನ ಮಾಡುವ ಹಾಗೆ ಯುವಶಕ್ತಿ ಕೇಳಿಸಿಕೊಳ್ಳಬೇಕು. ಮಾನವ ಜನಾಂಗವನ್ನು ವಿಚಾರ ಶಕ್ತಿ ಆಳುತ್ತದೆ. ಹಣ, ಅಧಿಕಾರ, ಆಸ್ತಿ ಬರುತ್ತವೆ ಮತ್ತು ಹೋಗುತ್ತವೆ. ಅದೇ ಸರ್ವಸ್ವ ಆಗಬಾರದು. ಬಂಧನದಿಂದ ನಿರಾವರಣದ ಕಡೆಗೆ ಹೋಗಬೇಕು. ಪ್ರತಿಯೊಬ್ಬರ ಶರೀರದಲ್ಲಿ ಶಕ್ತಿ ಇದೆ. ಶರೀರವು ಶಕ್ತಿಯ ಕೇಂದ್ರವಾಗಿದೆ ಎಂದರು.

ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡುತ್ತ, ಶರಣ ಪದ ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿದ್ದು. ಅದು ವಿಶ್ವವ್ಯಾಪಿಯಾದುದು. ಶರಣ ಪದದೊಂದಿಗೆ ಸೇನೆ ಪದ ಸಂಘಟನಾತ್ಮಕವಾದುದು. ಶರಣ ಸೇನೆ ಧಾರ್ಮಿಕ ತಳಹದಿಯ ಮೇಲೆ ಉದ್ಘಾಟನೆಗೊಂಡಿದೆ. ರಚನಾತ್ಮಕವಾಗಿ ಕೆಲಸ ಮಾಡಬೇಕಿದೆ. ಇದು ವ್ಯಕ್ತಿ, ಜಾತಿ, ಸಂಘಟನೆ ವಿರುದ್ಧ ರಚನೆಯಾದುದಲ್ಲ. ಉದಾತ್ತ ಚಿಂತನೆಗಳನ್ನು ಇಟ್ಟುಕೊಂಡು ರಚನೆಯಾಗಿದೆ. ದೇಶದಲ್ಲಿ ಯುವಶಕ್ತಿಯ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ರೈತರಿಗೆ ಅನುಕೂಲವಾಗುವ ಚಿತ್ರದುರ್ಗ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳ ಆದೇಶವಾಗಿದೆ ಎಂದು ತಿಳಿಸಿದರು.

Leave a Reply

Your email address will not be published.