ಕನ್ನಡ ಭಾಷೆಗೆ ಮತ್ತು ನಾಡಿಗೆ ಡಾ. ರಾಜ್ ಕುಟುಂಬದ ಕೊಡುಗೆ ಅಪೂರ್ವ : ಯೋಗೀಶ್ ಸಹ್ಯಾದ್ರಿ

ನಿತ್ಯವಾಣಿ,ಚಿತ್ರದುರ್ಗ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಜರಾಮರ. ಕನ್ನಡ ಭಾಷೆಗೆ ಮತ್ತು ನಾಡಿಗೆ ಡಾ. ರಾಜ್ ಕುಟುಂಬದ ಕೊಡುಗೆ ಅಪೂರ್ವ ಎಂದು ಉಪನ್ಯಾಸಕ ಹಾಗು ಮಕ್ಕಳ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ವಿದ್ಯಾನಗರದ ಈರುಳ್ಳಿ ಮಲ್ಲಪ್ಪ ಬಡಾವಣೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಮಾನವ ಹಕ್ಕುಗಳ ಕಲ್ಯಾಣ ಸಮಿತಿ ಹಾಗು ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ ಅವರು ಪುನೀತ್ ರಾಜಕುಮಾರ್ ಅವರ ಕೊಡುಗೆ ಕೇವಲ ಸಿನಿರಂಗಕ್ಕೆ ಸೀಮಿತವಾಗಿರದೆ ಮಕ್ಕಳ ಶಿಕ್ಷಣ ಸೇರಿದಂತೆ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಮನಸ್ಸುಗಳಲ್ಲಿ ‘ಅಪ್ಪು’ ಎಂಬ ಹೆಸರಿನಿಂದ ಪ್ರತಿ ಮನೆಯ ಮಗನಾಗಿದ್ದರು ಮತ್ತು ಮಕ್ಕಳಿಗೆ ನೆಚ್ಚಿನ ನಟ ಹಾಗು ಸ್ಪೂರ್ತಿಯ ಸೆಲೆಯಾಗಿದ್ದರು. ಪುನೀತ್ ಅವರ ಅಮೋಘ ನಟನೆ, ಸಾಮಾಜಿಕ ಸೇವಾ ಪ್ರಜ್ಞೆ, ಸರಳತೆ, ಅಭಿಮಾನಿಗಳನ್ನು ಸಂತೈಸುತ್ತಿದ್ದ ರೀತಿ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ, ಮಕ್ಕಳನ್ನು ಕಂಡರೆ ಅಪಾರ ಪ್ರೀತಿ, ಕೊನೆಯಿಲ್ಲದ ಮಂದಹಾಸ ಹೀಗೆ ಅವರ ಪ್ರತಿಯೊಂದು ಗುಣಗಳು ನಾಡಿನ ವಿದ್ಯಾರ್ಥಿಗಳಿಗೆ ಹಾಗು ಯುವಕರಿಗೆ ಸ್ಪೂರ್ತಿ ತುಂಬಿದ್ದವು ಎಂದು ತಿಳಿಸಿದರು.

ಜಾನಪದ ಅಕಾಡೆಮಿಯ ಸದಸ್ಯರಾದ ಗಾಯಕ ಕಾಲ್ಕೆರೆ ಚಂದ್ರಪ್ಪ ಮಾತನಾಡಿ ಪುನೀತ್ ರಾಜಕುಮಾರ್ ತಮ್ಮ ನಟನಾ ಕೌಶಲ್ಯ, ಗಾಯನದ ಮೂಲಕ ನಾಡಿನ ಜನತೆಯ ಮನಗೆದ್ದ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಅಭಿಪ್ರಾಯಪಟ್ಟರು ಹಾಗು ಪುನೀತ್ ಅಭಿನಯದ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಭಾವ ನಮನ ಸಲ್ಲಿಸಿದರು.

ಪೊಲೀಸ್ ವೃತ್ತ ನಿರೀಕ್ಷಕರಾದ ರಮಾಕಾಂತ್ ಮಾತನಾಡಿ ಪುನೀತ್ ರಾಜಕುಮಾರ್ ಜೊತೆ ಕಳೆದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಜೊತೆಗೆ ಪುನೀತ್ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ದಾದಾಪೀರ್ ಮಾತನಾಡಿದರು. ಗಾಯಕ ಡಿ ಓ ಮುರಾರ್ಜಿ ಮಾತನಾಡಿದರು.
ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಲಾವಿದ ಜಗದೀಶ್, ಈರುಳ್ಳಿ ಮಲ್ಲಪ್ಪ ಲೇಔಟ್ ನ ನಾಗರಾಜ್ ಸಿ ಎಂ, ವಕೀಲರಾದ ಶ್ರೀನಿವಾಸ್, ಬಿಜೆಪಿ ಯುವ ಮುಖಂಡ ಮಲ್ಲಿಕಾರ್ಜುನ ಸಿ ಎಂ, ವಾಸವಿ ಲ್ಯಾಬ್ ನ ಮೇಲ್ವಿಚಾರಕ ಬಸವೇಶ್, ರಾಮಣ್ಣ, ಶಿಕ್ಷಕ ಸುರೇಶ್, ಪಿಡಿಓ ಆನಂದ್, ಮುರುಳಿ, ಸಚಿನ್, ಮಣಿಕಂಠ, ಮಕ್ಕಳು, ಮಹಿಳೆಯರು ಇತರರು ಹಾಜರಿದ್ದರು. ಕಲಾವಿದರಾದ ಡಿ ಓ ಮುರಾರ್ಜಿ, ಕಾಲ್ಕೆರೆ ಚಂದ್ರಪ್ಪ, ಜಗದೀಶ್ ಹಾಗು ಸಂಗಡಿಗರು ಪುನೀತ್ ಅಭಿನಯದ ಹಾಡುಗಳ ಮೂಲಕ ಭಾವನಮನ ಸಲ್ಲಿಸಿದರು.

 

Leave a Reply

Your email address will not be published.