“ಜೈಲ್‌ ಭರೋ ಚಳವಳಿ’: ಸಿದ್ದರಾಮಯ್ಯ ಕರೆ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಅಸ್ತ್ರವಾಗಿಟುxಕೊಂಡು ಕಾಂಗ್ರೆಸ್‌ ಪಕ್ಷ ಬೀದಿಗಿಳಿದು ಹೋರಾಟ ನಡೆಸುವುದರ ಜೊತೆಗೆ “ಜೈಲ್‌ ಭರೋ’ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಭೂಸುಧಾರಣಾ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಸುಗ್ರಿವಾಜ್ಞೆ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಐದು ರೈತ ವಿರೋಧಿ ಕಾಯ್ದೆಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಹೊರ ತಂದಿರುವ ” ಬಿಜೆಪಿ ಸರ್ಕಾರಗಳ ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು’ ಕಿರು ಹೊತ್ತಿಗೆಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ರೈತ ವಿರೋಧಿ ಕಾಯ್ದೆಗಳ ಸತ್ಯಾಸತ್ಯತೆ ಜನರಿಗೆ ತಿಳಿಸುವ ವಿಚಾರಗಳನ್ನು ಒಳಗೊಂಡ ಕಿರು ಪುಸ್ತಕ ಬಿಡುಗಡೆ ಮಾಡಿದ್ದೇವೆ. ಜನರಿಗೆ ಸತ್ಯ ತಿಳಿಸುವುದು ನಮ್ಮ ಪ್ರಯತ್ನವಾಗಿದೆ.

ಇದಕ್ಕಾಗಿ ಬೀದಿಗಳಿದು ಕಾಂಗ್ರೆಸ್‌ ಪಕ್ಷ ಹೋರಾಟ ಮಾಡಲಿದೆ. ಜೊತೆಗೆ ಜೈಲ್‌ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೋರಾಟದ ರೋಪುರೇಷೆ ಸಿದ್ದಪಡಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಎ.ಪಿ.ಎಂ.ಸಿ ಕಾಯ್ದೆಗಳ ಬಗ್ಗೆ ಬಿಜೆಪಿಯವರು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿ ಮಾರುಕಟ್ಟೆಗೆ ಬಂದು ಮಾರಾಟ ಮಾಡುವ ಅಗತ್ಯವಿಲ್ಲ. ಅದನ್ನು ಯಾರಿಗೆ ಬೇಕಾದರೂ ಮಾರಬಹುದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿಯವರ ವಾದ. ಆದರೆ, ತಿದ್ದುಪಡಿಯಿಂದ ಖಾಸಗಿ ವ್ಯಕ್ತಿಗಳಿಗೆ ತಮ್ಮದೆ ಮಾರುಕಟ್ಟೆಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಇದರಿಂದ ಎಪಿಎಂಸಿಗಳು ಮುಚ್ಚಿ, ಕನಿಷ್ಟ ಬೆಂಬಲ ಬೆಲೆ ಇಲ್ಲದಂತಾಗಲಿದೆ. ಇದಕ್ಕಾಗಿಯೇ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕಾಯ್ದೆ ಜಾರಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು, ನಿರುದ್ಯೋಗಿ ಯುವಕ ಯುವತಿಯರಿಗೆ ಕೃಷಿ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತೆ ಎಂದು ಸರ್ಕಾರ ಹೇಳುತ್ತಿದೆ. ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿದರು. ಈಗ ಸರ್ಕಾರ 79(ಎ). (ಬಿ), (ಸಿ) ನಿಯಮಗಳನ್ನು ರದ್ದುಮಾಡಿ ಯಾರು ಬೇಕಾದರೂ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ತಿದ್ದುಪಡಿ ಮೂಲಕ ಉಳ್ಳವನನ್ನು ಭೂಮಿಯ ಒಡೆಯ ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Leave a Reply

Your email address will not be published.