ಬೆಂಗಳೂರು: ತನ್ನ ಸೊಗಸಾದ ಕಂಠದಿಂದಲೇ ಮನೆ ಮಾತಾಗಿರುವ ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ಅವರು ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಹಾಡಿ ಹೊಗಳಿದ್ದಾರೆ.
ಹೌದು, ಇತ್ತೀಚೆಗೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ‘ಕಣ್ಣು ಹೊಡಿಲಾಕ’ ಎಂಬ ಉತ್ತರ ಕರ್ನಾಟಕ ಭಾಷಾ ಶೈಲಿಯ ಹಾಡು ಸಖತ್ ಹಿಟ್ ಆಗಿದೆ. ಈ ಹಾಡನ್ನು ಕನ್ನಡದಲ್ಲಿ ಹಾಡಿರುವುದು ಶ್ರೇಯಾ ಘೋಶಾಲ್. ಯೂಟ್ಯೂಬ್ನಲ್ಲಿ ಈ ಹಾಡು ಇದೀಗ 2 ಕೋಟಿ ವೀಕ್ಷಣೆಗಳನ್ನು ಕಂಡಿದೆ.
ಈ ಕುರಿತು ಇಂದು ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿರುವ ಶ್ರೇಯಾ ಘೋಶಾಲ್, ನಾನು ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ ಕನ್ನಡದ ಹಾಡೊಂದನ್ನು ಹಾಡುವ ಅವಕಾಶ ಪಡೆದೆ. ಎಷ್ಟೊಂದು ಸುಂದರ ಭಾಷೆ! ಇದು 20 ಮಿಲಿಯನ್ ವೀಕ್ಷಣೆ ಕಂಡಿದ್ದು ನಿಜಕ್ಕೂ ಖುಷಿ ಕೊಟ್ಟಿದೆ. ಈ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ರಾಬರ್ಟ್ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ. ಕಣ್ಣು ಹೊಡಿಲಾಕ ಹಾಡನ್ನು ಯೋಗರಾಜ್ ಭಟ್ ಅವರು ರಚಿಸಿದ್ದಾರೆ.