ದೆಹಲಿಯಲ್ಲಿ ಸ್ಫೋಟ: ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
ನವದೆಹಲಿ, ಜನವರಿ 29: 72ನೇ ಗಣರಾಜ್ಯೋತ್ಸವ ನಂತರ ನಡೆಯುವ ಬೀಟಿಂಗ್ ರಿಟ್ರೀಟ್ ಸಂಭ್ರಮದ ನಡುವೆ ಸ್ಫೋಟದ ಸದ್ದು ಕೇಳಿಸಿದೆ.
ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಸಂಜೆ ಸ್ಫೋಟ ಸಂಭವಿಸಿದೆ. ಇದು ಯಾವ ರೀತಿ ಸ್ಫೋಟ ಎಂಬುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರ ವಿಶೇಷ ತಂಡ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನ ನಡೆಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಫೋಟದ ತೀವ್ರತೆಗೆ ನಾಲ್ಕೈದು ಕಾರುಗಳು ಧ್ವಂಸಗೊಂಡಿವೆ. ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಆದರೆ, ಯಾರೊಬ್ಬರಿಗೂ ಗಾಯಗಳಾಗಿರುವ ಸುದ್ದಿ ಬಂದಿಲ್ಲ.
ಇಸ್ರೇಲ್ ರಾಯಭಾರಿ ಕಚೇರಿಯಿಂದ ಕೇವಲ ಒಂದೂವರೆ ಕಿ.ಮೀ ದೂರದಲ್ಲಿ ಬೀಟಿಂಗ್ ರಿಟ್ರೀಟ್ ಸಂಭ್ರಮಾಚರಣೆ ನಡೆಯುತ್ತಿರುವ ವೇಳೆಗೆ ಈ ಸ್ಫೋಟ ಸಂಭವಿಸಿದ್ದು ಆತಂಕ ಮೂಡಿಸಿದೆ.
ದೆಹಲಿ ಪೊಲೀಸರ ಹೇಳಿಕೆ:
ಶುಕ್ರವಾರ ಸಂಜೆ 5:05ಕ್ಕೆ ಸುಮಾರಿಗೆ ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಜಿಂದಾಲ್ ಹೌಸ್ ಸಮೀಪದಲ್ಲಿ ಕಡಿಮೆ ತೀವ್ರತೆಯ ಐಇಡಿ ಸ್ಫೋಟಗೊಂಡಿದೆ. ವಾಹನದಲ್ಲಿ ಚಲಿಸುವಾಗ ಈ ಸ್ಫೋಟಕವನ್ನು ಎಸೆಯದಂತೆ ತೋರುತ್ತದೆ. ಹೂವಿನ ಕುಂಡದಲ್ಲಿ ಸ್ಫೋಟಕ ಪತ್ತೆಯಾಗಿದೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಮೂರು ವಾಹನಗಳ ಗಾಜು ಪುಡಿಯಾಗಿದೆ. ಆತಂಕ ಸೃಷ್ಟಿಯಲು ಯಾರೋ ದುಷ್ಕರ್ಮಿಗಳು ಮಾಡಿದ ಕೃತ್ಯದಂತೆ ತೋರುತ್ತದೆ ಎಂದಿದ್ದಾರೆ.
ದೆಹಲಿಯ ದುರ್ಘಟನೆ ಬಳಿಕ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೆಹಲಿಯ ಸರ್ಕಾರಿ ಕಟ್ಟಡ, ಪ್ರಮುಖ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್) ಹೇಳಿದೆ.