ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಕಜೆ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ಇಲಾಖೆ ಕ್ರಿಕೆಟ್ ಪಂದ್ಯಾವಳಿಗೆ ರೋಚಕ ತೆರೆ ಬಿದ್ದಿದೆ. ಫೆ.22 ರಿಂದ ಫೆ.27ರ ವರೆಗೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೇ ಪ್ರಥಮ ಬಾರಿಗೆ 17 ಇಲಾಖೆಗಳ ತಂಡಗಳು ಭಾಗವಹಿಸಿದ್ದವು. ನಾಕ್ ಔಟ್ ಮಾದರಿಯಲ್ಲಿ ನಡೆದ ಪಂದ್ಯಾವಳಿ ಸೆಮಿಫೈನಲ್ಸ್ ಗೆ ಕೆಪಿಟಿಸಿಎಲ್, ಅರಣ್ಯ ಇಲಾಖೆ, ಎಜುಕೇಶನ್ ಹಾಗು ಪೊಲೀಸ್ ಇಲಾಖೆ ತಂಡಗಳ ಪ್ರವೇಶ ಪಡೆದು, ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅರಣ್ಯ ಇಲಾಖೆ ತಂಡದ ವಿರುದ್ಧ ಸೆಣಸಾಟ ನಡೆಸಿದ ಎಜುಕೇಷನ್ ತಂಡ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದರೆ, ಎರಡನೇ ಸೆಮಿಫೈನಲ್ ಪಂದ್ಯವನ್ನಾಡಿದ ಕೆಪಿಟಿಸಿಎಲ್ ಹಾಗು ಪೊಲೀಸ್ ಇಲಾಖೆ ತಂಡಗಳಲ್ಲಿ ಪೊಲೀಸ್ ಇಲಾಖೆ ತಂಡ ಎರಡನೇ ತಂಡವಾಗಿ ಫೈನಲ್ ತಲುಪಿತು.
ಮಧ್ಯಾಹ್ನದ ನಂತರ ನಡೆದ ಅಂತರ್ ಇಲಾಖೆ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಲ್ಲಿ ಪೊಲೀಸ್ ಇಲಾಖೆ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಎಜುಕೇಶನ್ ಇಲಾಖೆ ತಂಡ ನಿಗಧಿಪಡಿಸಲಾಗಿದ್ದ 10 ಓವರ್ ಗಳ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತು. 78 ರನ್ ಗಳ ಗುರಿಯೊಂದಿಗೆ ಅಂಕಣಕ್ಕಿಳಿದ ಸಿಪಿಐ ರಾಘವೇಂದ್ರ ನಾಯಕತ್ವದ ಪೊಲೀಸ್ ತಂಡ ರೋಚಕ ಪ್ರದರ್ಶನ ನೀಡುವ ಮೂಲಕ ಎರಡು ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿ ಭರ್ಜರಿ ಜಯಗಳಿಸಿತು. ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆ ತಂಡ ಫೋರ್ ಸಿಕ್ಸ್ ಗಳಿಸಿದಾಗಲೆಲ್ಲಾ ಎದ್ದು ನಿಂತು ಚಪ್ಪಾಳೆ ಹಾಕುತ್ತಾ ಪ್ರೋತ್ಸಾಹಿಸುತ್ತಿದ್ದ ಎಸ್ಪಿ ಜಿ.ರಾಧಿಕಾ ಅವರು ಅಂತಿಮ ಪಂದ್ಯದಲ್ಲಿ ಪೊಲೀಸ್ ಇಲಾಖೆ ತಂಡ ಜಯಗಳಿಸಿದಾಗ ಯುದ್ದವನ್ನು ಗೆದ್ದ ಉತ್ಸಾಹದಲ್ಲಿ ನಗೆ ಬೀರಿದರೆ, ಅಡಿಷನಲ್ ಎಸ್ಪಿ ಮಹಾನಿಂಗ ಎಂ.ನಂದಗಾವಿ, ಡಿಎಆರ್ ಡಿವೈಎಸ್ಪಿ ಜಿ.ಎಂ ತಿಪ್ಪೇಸ್ವಾಮಿ, ಸಿಪಿಐಗಳಾದ ಪ್ರಕಾಶ್, ನಯೀಮ್ ಅಹ್ಮದ್, ಬಾಲಚಂದ್ರ ನಾಯ್ಕ್, ರಮೇಶ್ ರಾವ್, ಪಿಎಸ್ಐಗಳಾದ ಮಂಜುನಾಥ್ ಲಿಂಗಾರೆಡ್ಡಿ, ಶಂಕರಗೌಡ ಪಾಟೀಲ್, ಎಎಸ್ಐ ವೆಂಕಟೇಶ್(ಮಿಣಕ) ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಿರುವಾದ್ಯಗಳನ್ನು ನುಡಿಸುತ್ತಾ, ನೃತ್ಯಮಾಡುತ್ತಾ ತಂಡಕ್ಕೆ ಸ್ಪೂರ್ತಿ ನೀಡಿದರು.
ಸಂಜೆ ನಡದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೋಳಿ, ನ್ಯಾಯಾಧೀಶರಾದ ಬಸವರಾಜ್ ಚಂಗಾರೆಡ್ಡಿ, ನ್ಯಾ. ಜಿತೇಂದ್ರ, ಸಿಇಒ ನಂದಿನಿ ದೇವಿ, ಎಸ್ಪಿ ಜಿ.ರಾಧಿಕಾ, ಅಡಿಷನಲ್ ಎಸ್ಪಿ ಮಹಾನಿಂಗ ಎಂ.ನಂದಗಾವಿ, ಡಿಎಆರ್ ಡಿವೈಎಸ್ಪಿ ಜಿಎಂ ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಪರಾಜಿತ ಹಾಗು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಪ್ರಮಾಣ ಪತ್ರ ವಿತರಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.