ರಾಜ್ಯ ಸರ್ಕಾರಕ್ಕೆ ಮತ್ತೆ ‘ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿ’ಗೆ ನೌಕರರ ಪ್ರತಿಭಟನೆ ಬಿಸಿ : ಸದ್ಯದಲ್ಲೇ ‘ಬೃಹತ್ ಸಮಾವೇಶ’ದ ಮೂಲಕ ಹೋರಾಟದ ಎಚ್ಚರಿಕೆ

ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಸಮಾನ ಕೆಲಸಕ್ಕೆ ಸಮಾನವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ, ರಾಜ್ಯದ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಈ ಬಳಿಕ ರಚನೆಯಾದಂತ ಸಮಿತಿಯ ಕೆಲ ಶಿಫಾರಸ್ಸುಗಳಿಗೆ ವಿರೋಧ ವ್ಯಕ್ತ ಪಡಿಸಿರುವಂತ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘವೂ, ಇದೀಗ ಮತ್ತೆ ಬೃಹತ್ ಸಮಾವೇಶದ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮುಂದಾಗಿದೆ.

ಈ ಕುರಿತಂತೆ ಮಾಹಿತಿ ನೀಡಿದಂತ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಎಚ್ ಯಾಮೋಜಿ, ದಿನಾಂಕ 21.02.2021 ರಂದು ನಿಗದಿಯಂತೆ ರಾಜ್ಯ ಮಟ್ಟದ ಸಭೆಯನ್ನು ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅಥಿತಿಯಾಗಿ ಶ್ರೀ ಶಂಕರ್ ಸುಲೇಗಾಂವ್ ಕಾರ್ಯಾಧ್ಯಕ್ಷರು ಬಿ.ಎಂ.ಎಸ್ ಹಾಗೂ ನೀಲಕಂಠರೆಡ್ಡಿ ಉಪಾಧ್ಯಕ್ಷರು ಬಿ.ಎಂ.ಎಸ್ ಸಭೆಗೆ ಚಾಲನೆ ನೀಡಿ ಮಾರ್ಗದರ್ಶನ ನೀಡಿದರು.

ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್.ಯಾಮೋಜಿ ವಹಿಸಿದ್ದರು ಮತ್ತು ಶ್ರೀಕಾಂತಸ್ವಾಮಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪ್ರಕಾಶಗೌಡ ಬೆದವಟ್ಟಿ ಕೊಪ್ಪಳ ಜಿಲ್ಲಾ ಅಧ್ಯಕ್ಷರು, ಢಾ|| ಜಯಕುಮಾರ್‌ ಬ್ಯಾಳಿ ಉಪಾಧ್ಯಕ್ಷರು, ಶೇಖರ್‌ ದತ್ತುರ್‌ಗಿ ಕಾರ್ಯದರ್ಶಿ ಹಾಗೂ ಹಲವು ರಾಜ್ಯಮಟ್ಟದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಜಿಲ್ಲಾಧ್ಯಕ್ಷರು, ಇತರೆ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿದ್ದರು. ಸಭೆಯ ಉದ್ಘಾಟನೆಯ ನಂತರ ಪ್ರಾಸ್ತಾವಿಕವಾಗಿ ಶ್ರೀ ಗವಿಸಿದ್ಧಪ್ಪ ಡಿ. ಉಪ್ಪಾರ, ಸಂಘಟನಾ ಕಾರ್ಯದರ್ಶಿ ಮಾತನಾಡಿ ಸಂಘಟನೆಯು ಕೈಗೊಂಡ ಸಭೆಯ ಉದ್ದೇಶವನ್ನು ತಿಳಿಸಿದರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

1. ಸರ್ಕಾರ ರಚಿಸಿದ ಸಮಿತಿಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ನೌಕರರಿಗೆ ಪೂರಕವಾಗಿರುವ ಸಕಾರಾತ್ಮಕ ಅಂಶಗಳನ್ನು ಸಂಘವು ಸ್ವಾಗತಿಸುತ್ತದೆ. ಸದರಿ ವರದಿಯ ಶಿಫಾರಸ್ಸು ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಅನ್ವಯವಾಗುವಂತೆ ಅನುಷ್ಠಾನಗೊಳಿಸಬೇಕು. ಅದರಲ್ಲಿನ 15% ವೇತನ ಹೆಚ್ಚಳ ಪ್ರಸ್ತಾವನೆಯನ್ನು ಸಂಘವು ಖಂಡಿಸುತ್ತದೆ. ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ ನೀಡಲು ಒತ್ತಾಯಿಸುತ್ತೇವೆ ಮತ್ತು ಅದಕ್ಕೆ ಪೂರಕವಾದ ವೇತನ ಹೆಚ್ಚಳ ನಿರ್ಣಯ ಕೈಗೊಳ್ಳಲು ಸಂಘವು ಸರ್ಕಾರಕ್ಕೆ ಆಗ್ರಹಿಸುತ್ತದೆ.

2. ಸಮಿತಿಯ ಶಿಫಾರಸಿನಲ್ಲಿ ಪ್ರಸ್ತಾಪಿಸಿದಂತೆ ದಿನಗೂಲಿ ನೌಕರರ ಕಾಯ್ದೆಯ ಅಡಿಯಲ್ಲಿ ನೀಡಿರುವ ಸೌಲಭ್ಯಗಳನ್ನು ಆರೋಗ್ಯ ಮತ್ತು ವೈ. ಶಿ. ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಅನ್ವಯವಾಗುವಂತೆ ನೂತನ ಕಾಯ್ದೆ ರಚಿಸಿ ಸೇವಾಭದ್ರತೆ ನೀಡುವುದು.

3. ಸತತ ಪರಿಶ್ರಮದ ಫಲವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನೇರ ಗುತ್ತಿಗೆ ನೌಕರರನ್ನು HRMS ತಂತ್ರಾಂಶದ ಅಡಿಯಲ್ಲಿ ತಂದಿರುವುದನ್ನು ಸಂಘವು ಸ್ವಾಗತಿಸುತ್ತದೆ. ಅದರಂತೆ ಹೊರಗುತ್ತಿಗೆ ನೌಕರರನ್ನು ಕೂಡ ಸರ್ಕಾರದ ಹಂತದಲ್ಲಿ ವಿಶೇಷ ಸಂಸ್ಥೆ ಅಥವಾ ಸಂಘವನ್ನು ಸ್ಥಾಪಿಸಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ಅದರ ವ್ಯಾಪ್ತಿಗೆ ತಂದು HRMS ತಂತ್ರಾಂಶವನ್ನು ಅಳವಡಿಸುವಂತೆ ಸಂಘವು ಆಗ್ರಹಿಸುತ್ತದೆ. ಒಟ್ಟಿನಲ್ಲಿ ಎಲ್ಲಾ ಗುತ್ತಿಗೆ ಹೊರಗುತ್ತಿಗೆ ನೌಕರರನ್ನು HRMS ತಂತ್ರಾಂಶದಲ್ಲೇ ಬರುವಂತೆ ಮತ್ತು ಲೋಕಾಯುಕ್ತ ವರದಿಯಂತೆ ಸರಕಾರ ಕ್ರಮವಹಿಸಬೇಕು ಎಂಬುದು ಸಂಘದ ಸ್ಪಷ್ಟ ನಿಲುವು.

4. ಹೋರಾಟದ ಫಲವಾಗಿ ಕೋವಿಡ್-19 ಆಪತ್ತು ಪ್ರೋತ್ಸಾಹಧನ (COVID RISK INCENTIVE) ಕೆಲವು ಹುದ್ದೆಗಳಿಗೆ ನೀಡುವ ಆದೇಶ ಸರ್ಕಾರದಿಂದ ಹೊರಡಿಸಲಾಗಿತ್ತು ಅದರಂತೆ ಆರೋಗ್ಯ & ವೈ. ಶಿ. ಇಲಾಖೆಯ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಎಲ್ಲಾ ಹಂತದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ (ಎಲ್ಲ 30000ಕ್ಕೂ ಹೆಚ್ಚು ನೌಕರರಿಗೆ) ವಿಸ್ತರಿಸುವಂತೆ ಸಂಘವು ಆಗ್ರಹಿಸುತ್ತದೆ.

5. ಕೋವಿಡ್-19 ಸಂದರ್ಭದಲ್ಲಿ ಮೃತಪಟ್ಟ ಇಲಾಖೆ ಗುತ್ತಿಗೆ ಹೊರಗುತ್ತಿಗೆ ನೌಕರರ ಕುಟುಂಬಗಳಿಗೆ ಪರಿಹಾರ ಮತ್ತು ಇತರೆ ಸೌಲಭ್ಯ ನೀಡಬೇಕೆಂದು ಸಂಘವು ಆಗ್ರಹಿಸುತ್ತದೆ.

6. ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹೊರಗುತ್ತಿಗೆ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡುವುದು (ಪರಸ್ಪರ, ಖಾಲಿ ಜಾಗಕ್ಕೆ ವರ್ಗಾವಣೆ)

7. ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿಯ ಕೆಲವು ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರಸ್ತುತ ನೀಡುತ್ತಿದ್ದ ವೇತನವನ್ನು ಕಡಿಮೆ ಮಾಡಿರುವುದನ್ನು ಸರಿಪಡಿಸಬೇಕು ಮತ್ತು ‘ROP’ಯಲ್ಲಿಯೂ ಕಡಿಮೆ ಮಾಡಿರುವುದನ್ನು ಸಂಘವು ಖಂಡಿಸುತ್ತದೆ,ಈ ಕೂಡಲೇ ಸರಿಪಡಿಸಿ ಕ್ರಮ ಕೈಗೊಳ್ಳಲೇಬೇಕೆಂದು ಎಂದು ಸಂಘದ ವತಿಯಿಂದ ಆಗ್ರಹಿಸಿದೆ.

8. ಈಗಾಗಲೇ ಅನುಮೋದನೆಗೊಂಡಿರುವ Covid Risk Incentive ಅನ್ನೂ ನೀಡಲು ಕುಂಟು ನೆಪವೊಡ್ಡಿ ಎಲ್ಲಾ ನೌಕರರಿಗೆ ನೀಡದಂತೆ ಅಡ್ಡಿಪಡಿಸುತ್ತಿರುವುದು ಮತ್ತು ಜಿಲ್ಲಾ ಹಂತದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಕುರುಡು ನಿಯಮಗಳು ಸದರಿ ಸೌಲಭ್ಯಗಳ ಯಶಸ್ವಿ ಅನುಷ್ಠಾನಕ್ಕೆ ತಡೆಗೋಡೆ ನಿರ್ಮಿಸಿದಂತಾಗಿದೆ, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು.

9. Sep-Oct 2020ರ ಹೋರಾಟದ ಸಂದರ್ಭದಲ್ಲಿ ಆರೋಗ್ಯ ಸಚಿವರು 14ದಿನದ ಮುಷ್ಕರದ ವೇತನ ಪಾವತಿ ಸೇರಿದಂತೆ ಇತರೆ ಇತರೆ ಬೇಡಿಕೆಗಳ ಬಗ್ಗೆ ನೀಡಿದ ಲಿಖಿತ ಭರವಸೆಯನ್ನು ಅನುಷ್ಠಾನಗೊಳಿಸುವುದು. ಅದಲ್ಲದೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಮಿತಿ ವ್ಯಾಪ್ತಿಯಿಂದ ಈಡೇರದೆ (ಒಟ್ಟು 14 ಬೇಡಿಕೆಗಳಲ್ಲಿ) ಉಳಿದ ಬೇಡಿಕೆಗಳನ್ನು ಮತ್ತು ಪ್ರಸ್ತುತ ನೌಕರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಸಮಸ್ಯೆಗಳನ್ನು, ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು.

10. ಒಟ್ಟಿನಲ್ಲಿ ಎಲ್ಲಾ ಗುತ್ತಿಗೆ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಸರ್ಕಾರವು ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಮತ್ತು ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು.

ಈ ಮೇಲ್ಕಂಡ ನಿರ್ಣಯಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂಬುದಾಗಿ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದರಂತೆಯೇ, ಸದ್ಯದಲ್ಲೇ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಬೃಹತ್ ಸಮಾವೇಶ ನಡೆಸಲಿದ್ದು, ತಮ್ಮ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದೆ. ಒಂದು ವೇಳೆ ಬೇಡಿಕೆ ಈಡೇರಿಕೆಗೆ ಸರ್ಕಾರ ಮುಂದಾಗದೇ ಹೋದ್ರೇ, ಮತ್ತೆ ರಾಜ್ಯ ಸರ್ಕಾರಕ್ಕೆ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆಯ ಬಿಸಿ ಮುಟ್ಟಲಿದೆ.

Leave a Reply

Your email address will not be published.