ವಸತಿ ಶಾಲೆಯೊಂದರಲ್ಲಿ 215 ಮಕ್ಕಳ ಅಸ್ಥಿಪಂಜರ ಪತ್ತೆ

ನಿತ್ಯವಾಣಿ,ಟೊರೊಂಟೊ (ಮೇ,29) : 1978 ರಲ್ಲಿ ಮುಚ್ಚಲಾಗಿದ್ದ ಕೆನಡಾದ ಬ್ರಿಟೀಷ್ ಕೊಲಂಬಿಯಾದ ಸ್ಥಳೀಯ ವಸತಿ ಶಾಲೆಯೊಂದರಲ್ಲಿ 215 ಮಕ್ಕಳ ಅಸ್ಥಿಪಂಜರ ಪತ್ತೆಯಾಗಿವೆ ಎಂದು ವರದಿಯೊಂದು ಹೇಳಿದೆ. ಪತ್ತೆಯಾಗಿರುವ ಕಳೇಬರಗಳು ಬ್ರಿಟೀಷ್ ಕೊಲಂಬಿಯಾದ ಕಾಮ್​ಲೂಪ್ಸ್​ ಇಂಡಿಯನ್ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಸಂಬಂಧಿಸಿವೆ ಎನ್ನಲಾಗಿದೆ.

ಈ 215 ಮಕ್ಕಳಲ್ಲಿ ಕೆಲವು ಮಕ್ಕಳು ಮೂರು ವರ್ಷಕ್ಕಿಂತಲೂ ಚಿಕ್ಕವು ಎಂಬುದು ತಿಳಿದು ಬಂದಿದೆ. ರಡಾರ್ ತಂತ್ರಜ್ಞಾನದ ಸಹಾಯದಿಂದ ಕಳೇಬರಗಳನ್ನು ಪತ್ತೆಹಚ್ಚಲಾಗಿದೆ. ಈ ಘಟನೆ ಕೆನಡಾವನ್ನು ಬೆಚ್ಚಿ ಬೀಳಿಸಿದ್ದು, ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇದೊಂದು ಹೃದಯ ವಿದ್ರಾವಕ ಸಂಗತಿ ಎಂದು ಹೇಳಿದ್ದಾರೆ.

1840 ರಿಂದ 1990 ರವರೆಗೆ ಕೆನಡಾದಲ್ಲಿ ಕ್ರಿಶ್ಚಿಯನ್ ಚರ್ಚ್​ಗಳು ನಡೆಸುತ್ತಿದ್ದ ವಸತಿ ಶಾಲೆಗಳಲ್ಲಿ ದಾಖಲಾದ ಮಕ್ಕಳಿಗೆ ತಮ್ಮ ಮಾತೃಭಾಷೆ ಹಾಗೂ ಸಂಸ್ಕೃತಿಯನ್ನು ಪಾಲಿಸಲು ಶಾಲೆಗಳು ಅನುಮತಿ ನೀಡುತ್ತಿರಲಿಲ್ಲ. ಅಂತಹ ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟು ಅವರನ್ನು ಹಸಿವಿನಿಂದ ದೈಹಿಕ ನ್ಯೂನ್ಯತೆಗಳಿಂದ ಸಾಯುವಂತೆ ಮಾಡಲಾಗುತ್ತಿತ್ತು. ಅಂತಹ ಮಕ್ಕಳನ್ನು ಶಾಲೆಗಳಲ್ಲೇ ಹೂಳಲಾಗಿತ್ತು ಎಂದು ವರದಿ ಹೇಳಿದೆ.

ಈ ರೀತಿಯ ವಸತಿ ಶಾಲೆಗಳಲ್ಲಿ ಸುಮಾರು 4100 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಈ ಸಂಗತಿಯ ಬಗ್ಗೆ ಬೆಳಕು ಚೆಲ್ಲಿದ ಸಂಸ್ಥೆ ಹೇಳಿದೆ. ಕೆನಡಾದಲ್ಲಿನ ಹಿಂಸಾತ್ಮಕ ವಸತಿ ಶಾಲಾ ವ್ಯವಸ್ಥೆ ಬಗ್ಗೆ 2008 ರಲ್ಲಿ ಕೆನಡಾದ ಅಂದಿನ ಸರ್ಕಾರ ಸಾರ್ವಜನಿಕರ ಕ್ಷಮೆ ಕೇಳಿತ್ತು.

Leave a Reply

Your email address will not be published.