ಬೆಂಗಳೂರು, ಏಪ್ರಿಲ್ 09: ಸಿಲಿಕಾನ್ ಸಿಟಿ ಬೈಕ್ ಚಾಲನೆಗೂ ಮೊದಲು ಸೈಡ್ ಇಂಡಿಕೇಟರ್ ಜೊತೆ ಎರಡೂ ಕಡೆಗಳಲ್ಲಿ ಮಿರರ್ ಇದೆಯೋ ಇಲ್ಲವೋ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ. ಇಲ್ಲದಿದ್ದರೆ ನೀವು ದುಬಾರಿ ದಂಡವನ್ನು ತೆರಬೇಕಾಗುತ್ತದೆ.
ಬೆಂಗಳೂರಿನಂತಾ ನಗರದಲ್ಲಿ ಅಪಘಾತ, ಪ್ರಾಣಹಾನಿ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಶನಿವಾರದಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಎರಡೂ ಕಡೆ ಸೈಡ್ ಮಿರರ್ ಮತ್ತು ಸೈಡ್ ಇಂಡಿಕೇಟರ್ ಇಲ್ಲದಿದ್ದರೆ ಅಂಥ ಬೈಕ್ ಸವಾರರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹೆಲ್ಮೆಟ್ ಇಲ್ಲದೇ ಸಂಚರಿಸುವ ಬೈಕ್ ಸವಾರರು ಪ್ರಾಣ ಬಿಟ್ಟಿರುವ ಘಟನೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುಕ್ಕೆ ತೀರ್ಮಾನಿಸಲಾಗಿದೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರಿಗೂ ದಂಡ ವಿಧಿಸಲಾಗುತ್ತಿದೆ.
ಸೈಡ್ ಮಿರರ್ ಮತ್ತು ಇಂಡಿಕೇಟರ್ ಕಡ್ಡಾಯಕ್ಕೆ ಕಾರಣ:
ಬೈಕ್ ಚಾಲನೆ ಸಂದರ್ಭದಲ್ಲಿ ಹಿಂಭಾಗದಿಂದ ಬರುವ ವಾಹನಗಳನ್ನು ಗಮನಿಸದೇ ಎಡ ಮತ್ತು ಬಲ ತಿರುವು ತೆಗೆದುಕೊಳ್ಳುವಾಗ ಹೆಚ್ಚು ಅಪಘಾತಗಳು ಸಂಭವಿಸಿವೆ. ಇನ್ನೊಂದು ಕಡೆಯಿಂದ ಸೈಡ್ ಇಂಡಿಕೇಟರ್ ಇಲ್ಲದೇ ಏಕಾಏಕಿ ಬೈಕ್ ಅನ್ನು ತಿರುಗಿಸಿದ ವೇಳೆಯಲ್ಲಿ ಅತಿಹೆಚ್ಚು ಅಪಘಾತಗಳು ನಡೆದಿವೆ ಎಂದು ತಿಳಿದು ಬಂದಿದೆ. ಬೆಂಗಳೂರು ನಗರದಲ್ಲಿ ಅಪಘಾತಕ್ಕೆ ಕಾರಣವೇನು ಎಂದು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ಅಪಘಾತಗಳಿಗೆ ಕಾರಣವನ್ನು ಗಂಭೀರವಾಗಿ ತೆಗೆದುಕೊಂಡ ಹಿನ್ನೆಲೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸೈಡ್ ಇಂಡಿಕೇಟರ್ ಮತ್ತು ಎರಡೂ ಕಡೆಗಳಲ್ಲಿ ಮಿರರ್ ಇಲ್ಲದ ಬೈಕ್ ಚಾಲಕರಿಗೆ 500 ರೂಪಾಯಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.