ನಿತ್ಯವಾಣಿ,ಚಿತ್ರದುರ್ಗ,(ಜೂ.13) : ಕನ್ನಡ ಹಾಗೂ ಬಂಡಾಯ ಸಾಹಿತ್ಯಕ್ಕೆ ಕವಿ ಡಾ.ಸಿದ್ದಲಿಂಗಯ್ಯ ಅವರ ಕೊಡುಗೆ ಸ್ಮರಣೀಯವಾದುದು ಎಂದು ಹಿರಿಯ ಸಾಹಿತಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕಣಜನಹಳ್ಳಿ ನಾಗರಾಜ್ ಹೇಳಿದರು.
ನಗರದ ವಿ.ಪಿ.ಬಡಾವಣೆಯಲ್ಲಿರುವ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಮ್ಮಿಕೊಂಡಿದ್ದ ಕವಿ ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗೂಗಲ್ ಮೀಟ್ ಮೂಲಕ ಮಾತನಾಡಿದರು.
ಕವನ ಸಂಕಲನಗಳು, ಕಾದಂಬರಿ, ಕಥೆಗಳ ಮೂಲಕ ಸಿದ್ದಲಿಂಗಯ್ಯ ಸಂಚಲನ ಮೂಡಿಸಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ನಾಡಿನ ಜನತೆಯನ್ನು ಬಡಿದೆಬ್ಬಿಸಿದ ಸರಳ-ಸಜ್ಜನಿಕೆಯ ಸಾಹಿತಿ ಅವರಾಗಿದ್ದರು.
ಸ್ವಭಾವತಃ ಬಂಡಾಯದ ಧ್ವನಿ ಹೊಂದಿದ್ದ ಸಿದ್ದಲಿಂಗಯ್ಯನವರು ಸಮಾಜದ ಎಲ್ಲ ವರ್ಗದ ಶೋಷಿತರ ಪರವಾಗಿ ಧ್ವನಿಯೆತ್ತಿದ್ದರು. ದೀನ ದಲಿತರ ಬಗ್ಗೆ ಕಾಳಜಿ, ಸಾಮಾಜಿಕ ಕಳಕಳಿ ಅವರ ಕೃತಿಗಳಲ್ಲಿ ಕಾಣಬಹುದಾದ ಪ್ರಮುಖ ಅಂಶವಾಗಿದೆ. ಸಿದ್ದಲಿಂಗಯ್ಯ ಅವರಲ್ಲಿರುವ ಸಂಘರ್ಷದ ಮನೋಭಾವ ಶೋಷಿತರ ಶೋಷಣೆ ವಿರುದ್ಧ ಸಂಘರ್ಷವನ್ನು, ವಿರೋಧವನ್ನು ವ್ಯಕ್ತಪಡಿಸುವ ಮಾನವೀಯ ಕಾಳಜಿಯಾಗಿರುತ್ತದೆ. ಬಹುಶಃ ದೇವನೂರು ಮಹಾದೇವ ಅಂಥವರ ಸ್ಥಾನದಲ್ಲಿ ಅವರಷ್ಟೇ ಗಟ್ಟಿತನದಿಂದ ಅಭಿವ್ಯಕ್ತಿಗೊಳಿಸುವ ಗುಣ ಸಿದ್ದಲಿಂಗಯ್ಯ ಅವರಲ್ಲಿ ಇದ್ದುದರಿಂದಲೇ ಅವರು ಒಬ್ಬ ಸಮರ್ಥ ಕವಿಯಾಗಿ ಜೀವಪರ ನಿಲುವುಗಳನ್ನು ಅಭಿವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಲೇಖಕ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ಮಾತನಾಡಿ, ಕನ್ನಡ ಬಂಡಾಯ ಸಾಹಿತ್ಯದ ದೃವತಾರೆ ಹಾಗು ಕನ್ನಡ ಸಾರಸ್ವತ ಲೋಕದ ಮೇರು ಪ್ರತಿಭೆ ಸಾಹಿತಿ ಡಾ. ಸಿದ್ದಲಿಂಗಯ್ಯನವರು. ಅವರ ಸಾಹಿತ್ಯಕ ಕೃತಿಗಳು ಕನ್ನಡ ಭಾಷೆಗೆ ಹೊಸ ದಿಕ್ಕನ್ನು ತೋರಿಸಿ ಕೊಟ್ಟಿದ್ದವು ಎಂದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಉಕ್ಕಿನ ಮನುಷ್ಯನಂತೆ ಬದುಕಿದ್ದರು. ಅವರ ಬರಹಗಳು ತೀಕ್ಷ್ಣ ಹಾಗೂ ಪ್ರಖರತೆಯಿಂದ ಕೂಡಿರುವುದನ್ನು ಸಾಹಿತ್ಯ ಪ್ರಿಯರು ಮನಗಂಡಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ಒಬ್ಬ ಸಾಮಾನ್ಯ ಸರಳ ಜೀವಿಯಾಗಿ, ವೃತ್ತಿ ಜೀವನದಲ್ಲಿ ಅಪಾರ ಸಂಖ್ಯೆಯ ಶಿಷ್ಯರನ್ನು ಸಂಪಾದಿಸಿ, ಸಾಮಾಜಿಕ ಬದುಕಿನಲ್ಲಿ ನ್ಯಾಯ, ಸಮಾನತೆ ಮಾತ್ರವಲ್ಲದೆ ಶೋಷಿತ ವರ್ಗದ ಧ್ವನಿಯಾಗಿ ಸಾರ್ಥಕ ಸೇವೆಯ ಮೂಲಕ ವಿಶ್ವದ ಕನ್ನಡಿಗರ ಗರ್ವವನ್ನು ಹೆಚ್ಚಿಸಿದ ಮಹಾನ್ ಚೇತನ ಡಾ. ಸಿದ್ದಲಿಂಗಯ್ಯ ಶ್ಲಾಘಿಸಿದರು.
ಕನ್ನಡದ ಕಟ್ಟಾಳು ಸಿದ್ದಲಿಂಗಯ್ಯ ಅವರು ನಮ್ಮನ್ನಗಲಿದ ಸುದ್ದಿ ನಾಡಿನ ಜನತೆಯನ್ನು ಅತೀವ ದುಃಖಕ್ಕೆ ದೂಡಿದೆ. ಅವರೊಬ್ಬ ರಾಷ್ಟ್ರೀಯ ವಿಚಾರಗಳಿಗೆ ಪೂರಕವಾಗಿದ್ದ ಬರಹಗಾರರಾಗಿದ್ದರು. ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಮಾತ್ರವಲ್ಲದೆ, ಸಿದ್ದಲಿಂಗಯ್ಯನವರ ವ್ಯಕ್ತಿತ್ವದ ಮತ್ತೊಬ್ಬ ಸಾಹಿತಿಯನ್ನು ಕಾಣಲು ಸಾಧ್ಯವಿಲ್ಲ ಎಂದರು.
ಅಭಾಸಪ ಜಿಲ್ಲಾ ಕಾರ್ಯದರ್ಶಿ ರವಿಕಿರಣ್, ಸಹ-ಕಾರ್ಯದರ್ಶಿ ಕೆಂಚವೀರಪ್ಪ, ಜಿಲ್ಲಾ ಉಪಾಧ್ಯಕ್ಷ ಚಳ್ಳಕೆರೆ ಶ್ರೀವತ್ಸ, ಘಟಕ ಸಂಚಾಲಕ ನಾಗರಾಜ್ ಬೇದ್ರೆ, ಉಪನ್ಯಾಸಕಿ ವರಲಕ್ಷ್ಮಿ, ಬಜರಂಗದಳ ವಿಭಾಗ ಸಂಚಾಲಕ ಪ್ರಭಂಜನ್, ಚಂದ್ರಿಕಾ, ಧನಂಜಯ ಮೆಂಗಸಂದ್ರ ಮತ್ತಿತರರು ಭಾಗವಹಿಸಿದ್ದರು.
ಸುದ್ದಿಗಾಗಿ, ಜಾಹೀರಾತಿಗಾಗಿ ,👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com