ದಿ.ಜಯಲಲಿತಾ ಅವರ ಆಪ್ತಗೆಳತಿಗೆ ಸಿಗುವುದಾ ಬಿಡುಗಡೆ ಭಾಗ್ಯ?

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ಆಪ್ತಗೆಳತಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿ.ಕೆ.ಶಶಿಕಲಾ ಯಾವಾಗ ಜೈಲಿನಿಂದ ಹೊರಬರುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ಒಂದು ಉತ್ತರ ಸಿಕ್ಕಂತಾಗಿದೆ. ಸದ್ಯದ ಮಾಹಿತಿ ಪ್ರಕಾರ ಅವರಿಗೆ ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಲಭಿಸುವ ಸಾಧ್ಯತೆಗಳಿವೆ. ಈ ವಿಷಯ ಅವರ ವಕೀಲರಿಂದಲೇ ಬಹಿರಂಗಗೊಂಡಿದೆ.

ಆದಾಯ ತೆರಿಗೆ ಪಾವತಿ ಕುರಿತು ದಾಖಲಾಗಿರುವ ಪ್ರಕರಣದ ಸಂಬಂಧ ವಿಚಾರಣೆಯನ್ನು ಮುಂದೂಡುವಂತೆ ಶಶಿಕಲಾ ಅವರ ವಕೀಲರು ಮದ್ರಾಸ್ ಹೈಕೋರ್ಟ್​ನಲ್ಲಿ ಮನವಿ ಮಾಡಿಕೊಳ್ಳುವ ವೇಳೆ ಅವರ ಬಿಡುಗಡೆಯ ಕುರಿತು ಮಾಹಿತಿ ಹೊರಬಿದ್ದಿದೆ.

1994-95ರ ಆರ್ಥಿಕ ವರ್ಷದಲ್ಲಿನ 28.86 ಲಕ್ಷ ರೂ. ಇನ್​ಕಮ್​ ಟ್ಯಾಕ್ಸ್​ ರಿಟರ್ನ್ಸ್​ ಬಾಬ್ತು ಸಲ್ಲಿಕೆ ವೇಳೆ ಆ ವರ್ಷದಲ್ಲಿ ಖರೀದಿಸಿದ್ದ 80 ಎಕರೆ ಜಾಗದ ಮಾಹಿತಿ ಮುಚ್ಚಿಟ್ಟಿದ್ದರು ಎಂದು ಡೈರೆಕ್ಟೊರೇಟ್​ ಆಫ್​ ವಿಜಿಲೆನ್ಸ್​ ಆಯಂಡ್​ ಆಯಂಟಿ ಕರಪ್ಷನ್​ (ಡಿವಿಎಸಿ) ಆರೋಪಿಸಿತ್ತು. ಇದರ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ 2002ರ ಮಾರ್ಚ್​ 14ರಂದು 48 ಲಕ್ಷ ರೂ. ತೆರಿಗೆ ಕಟ್ಟುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಶಶಿಕಲಾ ಇನ್​ಕಮ್​ ಟ್ಯಾಕ್ಸ್​ ಅಪೆಲ್ಲೇಟ್​ ಟ್ರಿಬ್ಯುನಲ್​ (ಐಟಿಎಟಿ) ಮೊರೆ ಹೋಗಿದ್ದು, ಟ್ರಿಬ್ಯುನಲ್ ಶಶಿಕಲಾ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಮದ್ರಾಸ್​ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿ ನ್ಯಾಯಮೂರ್ತಿಗಳಾದ ಎಂ. ದೊರೆಸ್ವಾಮಿ ಹಾಗೂ ಟಿ.ವಿ.ತಮಿಳ್​ ಸೆಲ್ವಿ ಅವರಿರುವ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಅದಕ್ಕೆ ಶಶಿಕಲಾ ಪರ ವಕೀಲರು ಮಾಹಿತಿ ನೀಡಿದ್ದರು. ಶಶಿಕಲಾ ಜ. 27ರ ಹಾಗೆ ಬಿಡುಗಡೆಯಾಗಲಿದ್ದು, ಪ್ರಕರಣದ ವಿಚಾರಣೆಯನ್ನು ಜ. 27ರ ನಂತರಕ್ಕೆ ಮುಂದೂಡಬೇಕು ಎಂದು ಅವರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಆದಾಯ ಇಲಾಖೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ್ದರಿಂದ ವಿಭಾಗೀಯ ಪೀಠವು ವಿಚಾರಣೆಯನ್ನು ಫೆ. 4ಕ್ಕೆ ಮುಂದೂಡಿತು

Leave a Reply

Your email address will not be published.