ನಿತ್ಯವಾಣಿ,ಚಿತ್ರದುರ್ಗ, (ಅ.07) : ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಲಿಂಗಾಯತ ಸಮುದಾಯದ ಎಲ್ಲಾ ಮುಖಂಡರ ಸಭೆ ಭರ್ಜರಿಯಾಗಿಯೇ ನಡೆದಿದೆ. ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಂದೆಡೆ ಸೇರಿಸಿ ಶಕ್ತಿಯುತ ಒಕ್ಕೂಟ ಮಾಡಿರುವ ಅನೇಕ ಮನಸುಗಳು ಚಿತ್ರದುರ್ಗ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳ ಒಕ್ಕೂಟದಿಂದ ಆತ್ಮಾವಲೋಕನ ಸಭೆಯನ್ನು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಸುವ ಮೂಲಕ ಜಿಲ್ಲೆಗೆ ಹೊಸ ಮೆಸೇಜ್ ರವಾನೆ ಮಾಡಿದ್ದಾರೆ.
ಸಾಧು ಲಿಂಗಾಯತ, ಪಂಚಾಚಾರ್ಯ, ಪಂಚಮಸಾಲಿ ಲಿಂಗಾಯತ, ಗಾಣಿಗ ಲಿಂಗಾಯತ, ರೆಡ್ಡಿ ಲಿಂಗಾಯತ, ಬಣಜಿಗ ಲಿಂಗಾಯತ, ನೊಣಬ ಲಿಂಗಾಯತ, ಕುಂಚಿಟಿಗ ಲಿಂಗಾಯತ, ಜಂಗಮರು ಹೀಗೆ ಅನೇಕ ಒಳ ಪಂಗಡಗಳ ಗೆಳೆಯರು ಸೇರುವ ಮೂಲಕ ತಮ್ಮದೇ ಅಭಿಪ್ರಾಯ ಮಂಡಿಸಿದರು. ಗುಪ್ತವಾಗಿ ಮಾಡಿದ ಸಭೆಯಾದರೂ ಆತ್ಮೀಯವಾಗಿ ಸ್ವಾಗತಿಸಿದ ಎಲ್ಲರೂ ಆಗಮಿಸಿದ್ದರು.
ಇದೊಂದು ಒಂದು ಮಹತ್ವವಾದ ಸಭೆಯಾಗಿ ಅನೇಕ ವಿಷಯಗಳನ್ನು ಗಹನವಾಗಿ ಚರ್ಚೆ ಮಾಡಲಾಗಿದೆ. ವೀರಶೈವ ಲಿಂಗಾಯಿತ ಜನಾಂಗದ ಒಗ್ಗೂಡುವಿಕೆ, ಇತ್ತೀಚಿನ ದಿನಗಳಲ್ಲಿ ಸಮಾಜದ ಬಂಧುಗಳಿಗೆ ಆದಂತಹ ನೋವುಗಳು, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸಮಾಜದ ಬಂಧುಗಳನ್ನು ನಡೆಸಿಕೊಂಡಿರುವ ರೀತಿಯನ್ನು ಖಂಡಿಸಿ ನಡೆದಿರುವ ಒಂದು ಆತ್ಮಾವಲೋಕನ ಸಭೆಯಾಗಿದ್ದು, ಅನೇಕ ವೀರಾಗ್ರಣಿಗಳು ಆಗಮಿಸಿ ಸಭೆಗೆ ಹೆಚ್ಚು ಶಕ್ತಿ ತುಂಬಿದ್ದಾರೆ.
ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟದ ಈ ಸಭೆಯಲ್ಲಿ ಅನೇಕ ವಿಷಯಗಳ ಚರ್ಚೆಯಾಗಿದ್ದು ವೀರಶೈವ ಲಿಂಗಾಯತರಲ್ಲಿ ಶೇಕಡ 80% ರಷ್ಟು ಬಡವರಿದ್ದು, 20% ರಷ್ಟು ಕೇವಲ ಸಬಲರಾಗಿದ್ದಾರೆ, ಲಿಂಗಾಯತ ಆದರೇ ಶ್ರೀಮಂತರೇ ಎಂಬ ಮಾತು ಇಲ್ಲಿ ಸತ್ಯವಲ್ಲ. ಬದಲಿಗೆ ನಮ್ಮಲ್ಲಿನ ಅನೇಕ ಬಡವರಿಗೆ ನಾವು ಕೈ ಹಿಡಿಯಬೇಕು ಎಂಬ ಚರ್ಚೆಯಾಗಿದೆ.
ವೀರಶೈವ ಲಿಂಗಾಯತರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುವಂತಹ ಅನೇಕ ಶೈಕ್ಷಣಿಕ ಕಾರ್ಯಗಳು ನಡೆಯಬೇಕು ಮತ್ತು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅನುಕೂಲಗಳು ಎಲ್ಲರಿಗೂ ದೊರೆಯಬೇಕು ಎಂಬ ಚರ್ಚೆಯಾಯಿತು.
ರಾಜಕೀಯವಾಗಿ ನಾವು ಸುಭದ್ರರಾಗಬೇಕೆಂಬ ಹಿನ್ನೆಲೆಯಲ್ಲಿ ಎಲ್ಲರೂ ಒಂದಾಗಬೇಕು ಎಂಬ ಕೂಗು ಕೇಳಿ ಬಂತು.