ಬೆಂಗಳೂರು: ಸೆಕ್ಸ್ ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕೆಲವೇ ಕ್ಷಣಗಳಲ್ಲಿ, ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾದ ಯುವತಿ ಕೂಡ ಹೇಳಿಕೆಯೊಂದನ್ನು ನೀಡಿ ಗೃಹಸಚಿವರು ರಕ್ಷಣೆ ಒದಗಿಸಬೇಕು ಎಂದು ಕೋರಿದ್ದಾಳೆ.
ಯುವತಿ ರಕ್ಷಣೆ ಕೋರಿರುವ ದೃಶ್ಯಾವಳಿ ಮಾಧ್ಯಮಗಳಿಗೆ ಸಿಕ್ಕಿದ್ದು, ಅದು ಎಲ್ಲೆಡೆ ಬಿತ್ತರವಾಗಿದೆ. ಇದರ ಬೆನ್ನಿಗೆ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಆ ಯುವತಿಯ ವಿಡಿಯೋ ನಾನು ನೋಡಿಲ್ಲ. ನಾನು ದೂರು ಕೊಟ್ಟ ಕೂಡಲೇ ವಿಡಿಯೋ ಹೊರಬರುತ್ತದೆ. ಇದರ ಹಿಂದೆ ಕೂಡ ಷಡ್ಯಂತ್ರವಿದೆ, ಯುವತಿ ದೂರು ಕೊಡುವುದಾದರೆ ಕೊಡಲಿ. ನಾನು ಫೇಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮಧ್ಯೆ ಅವರು ಗೃಹಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿರುವ ಗೃಹಸಚಿವ ಬಸವರಾಜ ಬೊಮ್ಮಾಯಿ, ಆ ಯುವತಿ ಬಿಡುಗಡೆ ಮಾಡಿರುವ ವಿಡಿಯೋ ಗಮನಿಸಿಲ್ಲ, ಮಾಧ್ಯಮಗಳಲ್ಲಿ ಆ ಬಗ್ಗೆ ಸುದ್ದಿ ನೋಡಿದ್ದೇನೆ. ಆಕೆಯ ಕುಟುಂಬಕ್ಕೆ ಜೀವ ಭಯವಿದೆ ಎಂದಿರುವುದು ಗಮನಕ್ಕೆ ಬಂದಿದೆ. ಆಕೆಯ ಕುಟುಂಬಕ್ಕೆ ಸೂಕ್ತ ಭದ್ರತೆ ಕೊಡುವಂತೆ ಎಸ್‌ಐಟಿ ಮುಖ್ಯಸ್ಥರಿಗೆ ಹೇಳಿದ್ದೇನೆ. ಇನ್ನು ಸಿಡಿಯ ಸತ್ಯಾಸತ್ಯತೆ ಬಗ್ಗೆ ಎಸ್‌ಐಟಿ ತನಿಖೆಗೆ ಸೂಚಿಸಿರುವುದರಿಂದ ಸದ್ಯದಲ್ಲೇ ಸತ್ಯಾಂಶ ಹೊರಬೀಳಲಿದೆ ಎಂದು ಗೃಹಸಚಿವರು ತಿಳಿಸಿದ್ದಾರೆ.