ಕೊರೋನಾ ಪರಿಸ್ಥಿತಿ ಎದುರಿಸಲು ವಿಫಲ : ಮೋದಿ ವಿರುದ್ಧ ಸೋನಿಯಾ ವಾಗ್ದಾಳಿ

ನವದೆಹಲಿ, ಏ.10 : ದೇಶದಲ್ಲಿ ಕೊರೋನೋ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಅಸಮರ್ಪಕ ನಿರ್ವಹಣೆಯಿಂದಾಗಿ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ವರ್ಚುವಲ್ ಮೂಲಕ ನಡೆಸಿದ ಅವರು ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದರು.

ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ ಅವರು, ಮೋದಿ ಸರ್ಕಾರ ಕೊರೋನಾ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ವಿಫಲವಾಗಿರುವುದು ಸೋಂಕು ಹೆಚ್ಚಳಕ್ಕೆ ಕಾರಷವಾಗಿದೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಕೊರೋನೋ ಸೋಂಕಿನ ಎರಡನೇ ಅಲೆ ಮಿತಿಮೀರಿ ಹೆಚ್ಚಾಗುತ್ತಿದೆ . ಸೂಕ್ತ ಕ್ರಮಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ವಿಫಲವಾಗಿದ್ದಾರೆ ಈ ಕಾರಣಕ್ಕಾಗಿ ದೇಶದಲ್ಲಿ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆಯ ಕೊರತೆ ಎದುರಾಗಿದೆ ಅದನ್ನು ಪೂರೈಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಸಮರ್ಪಕವಾಗಿ ಲಸಿಕೆ ಇರುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿ.ಆ ಜವಾಬ್ದಾರಿಯನ್ನು ಚಾಚೂತಪ್ಪದೆ ಪಾಲಿಸಬೇಕು ಈ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಪಾರದರ್ಶಕತೆಗೆ ಆದ್ಯತೆ ನೀಡಿ:

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಎಷ್ಟು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಷ್ಟು ಮಂದಿಗೆ ಸೋಂಕು ಇದೆ ಎನ್ನುವ ಪಾರದರ್ಶಕತೆಯನ್ನು ದೇಶದ ಜನರ ಮುಂದಿಡಿ ಎಂದು ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಅದೇ ರೀತಿ ಲಸಿಕೆ ಪೂರೈಕೆ ವಿಷಯದಲ್ಲಿ ಕೂಡ ಜನರ ಮುಂದೆ ಇರುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಿ ಎಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published.