ಸರ್ಕಾರ ರಚನೆಗೆ ಸಹಕರಿಸಿದವರಿಗೆ ಸ್ಥಾನಮಾನ ನೀಡುವುದು ಅನಿವಾರ್ಯ:: ಬಿ.ಎಸ್‌. ಯಡಿಯೂರಪ್ಪ

ಶಿವಮೊಗ್ಗ: ಬಹಿರಂಗ ಹೇಳಿಕೆ ನೀಡುವ ಮೂಲಕ ಸರ್ಕಾರ, ಪಕ್ಷಕ್ಕೆ ಮುಜುಗರ ಸೃಷ್ಟಿಸುವ ಮುಖಂಡರು, ಕಾರ್ಯಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವ ಮೂಲಕ ಎರಡು ದಿನಗಳು ನಗರದಲ್ಲಿ ನಡೆದ ಬಿಜೆಪಿ ವಿಶೇಷ ಸಭೆ ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳಿಗೆ ತೆರೆ ಎಳೆದಿದೆ.

ಸರ್ಕಾರದ ವಿರುದ್ಧ ನಿರಂತರ ಹೇಳಿಕೆ ನಿಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ‘ಪಕ್ಷದ ಮುಖಂಡರೇ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಮುಜುಗರ ತರುತ್ತಿದ್ದಾರೆ. ನಮ್ಮವರ ಹೇಳಿಕೆಗಳನ್ನೇ ಉದಾಹರಿಸಿ ವಿರೋಧ ಪಕ್ಷದ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಪಕ್ಷದ ಪ್ರಮುಖರ ಎದುರು ಅಳಲು ತೋಡಿಕೊಂಡಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತ ಸಿಗಲಿಲ್ಲ. ಬೇರೆ ಪಕ್ಷಗಳ ಶಾಸಕರು ತಮ್ಮ ಮೇಲೆ ವಿಶ್ವಾಸವಿಟ್ಟು ರಾಜೀನಾಮೆ ನೀಡಿ, ಪಕ್ಷಕ್ಕೆ ಬಂದಿದ್ದಾರೆ. ಅವರ ಸಹಕಾರದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅಂದು ಸರ್ಕಾರ ರಚನೆಗೆ ಸಹಕರಿಸಿದವರಿಗೆ ಸ್ಥಾನಮಾನ ನೀಡುವುದು ಅನಿವಾರ್ಯ. ಇಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾತನಾಡುವುದು ಎಷ್ಟು ಸರಿ? ಎಲ್ಲರೂ ಸಹಕರಿಸಿದರೆ ಉಳಿದ ಎರಡೂವರೆ ವರ್ಷ ಉತ್ತಮ ಆಡಳಿತ ನೀಡಿ, ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲಬಹುದು. ಆಗ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿರುವೆ ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published.