ಚಿತ್ರದುರ್ಗ: ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರಬೋಸ್ ಇವರುಗಳು ದೇಶ ಮೊದಲು ಎನ್ನುವ ಪರಿಕಲ್ಪನೆಯನ್ನು ಕಣ್ಣ ಮುಂದೆ ಇಟ್ಟಿಕೊಂಡು ದೇಶಭಕ್ತ ಎಂದೆನಿಸಿಕೊಂಡರು. ಅದರಂತೆ ಬದ್ದತೆ, ಪರಿಶ್ರಮದ ಮೂಲಕ ನೇತೃತ್ವ ವಹಿಸಿಕೊಳ್ಳುವ ಹೊಣೆಗಾರಿಕೆ ಯುವ ಮೋರ್ಚಾದ ಮೇಲಿದೆ ಎಂದು ಕಾರ್ಕಳ ಶಾಸಕ ಸುನಿಲ್‍ಕುಮಾರ್ ತಿಳಿಸಿದರು.
ತುರುವನೂರು ರಸ್ತೆಯಲ್ಲಿರುವ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಭಾರತೀಯ ಜನತಾಪಾರ್ಟಿ ಯುವ ಮೋರ್ಚ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶಕ್ಕಾಗಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಕಾರ್ಯಕರ್ತರು ನಮ್ಮ ಮುಂದೆ ಇದ್ದಾರೆ. ರಾಜಕೀಯ ನೇತೃತ್ವ ಕೊಡುವ ಹೊಣೆಗಾರಿಕೆ ಯುವ ಮೋರ್ಚ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳ ಮೇಲಿದೆ. ಬದ್ದತೆ, ಪರಿಶ್ರಮದ ಮೂಲಕ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಇವರುಗಳು ಅಧಿಕಾರಕ್ಕೇರಲು ಸಾಧ್ಯವಾಯಿತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಅಧಿಕಾರದಲ್ಲಿದೆ. ಇದೊಂದು ಪರ್ವ ಕಾಲ ಆಗಂತ ಕಾರ್ಯಕರ್ತರು ಮೈಮರೆತರೆ ಬಿಜೆಪಿ.ಪಥನವಾದರೂ ಆಗಬಹುದು ಎಂದು ಎಚ್ಚರಿಸಿದರು.
ಫೇಸ್‍ಬುಕ್, ಫ್ಲೆಕ್ಸ್, ಬ್ಯಾನರ್, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಸಿಕೊಂಡು ನಾಯಕರುಗಳ ಜೊತೆ ಫೋಟೋಗಳನ್ನು ತೆಗೆಸಿಕೊಳ್ಳುವುದು ಬದ್ದತೆಯಲ್ಲ. ಬದ್ದತೆ, ಪರಿಶ್ರಮದಿಂದ ನೇತೃತ್ವ ಸಿಗದಿದ್ದರೆ ಯುವ ಮೋರ್ಚ ಆಗಲು ಸಾಧ್ಯವಿಲ್ಲ. ಜಾತಿಯನ್ನು ವೈಭವೀಕರಿಸಿ, ಚುನಾವಣೆಯಲ್ಲಿ ಹಣ ಖರ್ಚು ಮಾಡುವುದು ಬದ್ದತೆಯಲ್ಲ. ಒಂದು ಕಾಲದಲ್ಲಿ ಕಾರ್ಯಕರ್ತರು ಪಾಂಪ್ಲೆಟ್ಸ್‍ಗಳನ್ನು ಮುದ್ರಿಸಲು ಆಗುತ್ತಿರಲಿಲ್ಲ. ಈಗ ಬದಲಾಗಿದೆ. ಯುವ ಮೋರ್ಚ ಕಾರ್ಯಕರ್ತರು ಸದುಪಯೋಗಪಡಿಸಿಕೊಳ್ಳಬೇಕು. ಯುವ ಮೋರ್ಚ ಎದುರು ಅನೇಕ ಸವಾಲುಗಳಿವೆ. ಮುತ್ತುರತ್ನಗಳನ್ನು ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ ವಿಜಯನಗರ ಪಥನವಾಗಿದ್ದನ್ನು ಕೇಳಿದ್ದೇವೆ. ಬಾಲ್ಯದಲ್ಲಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ ತನ್ನ ಬಳಿ ಕುದುರೆ, ಮದ್ದುಗುಂಡು, ಸೈನ್ಯ ಯಾವುದೂ ಇಲ್ಲದೆ ಬರಿಗೈಯಲ್ಲಿದ್ದಾಗ ತನ್ನ ಸುತ್ತಮುತ್ತಲಿನ ಮರಾಠ ಹುಡುಗರನ್ನು ಕಲೆಹಾಕಿಕೊಂಡು ಹಿಂದು ಸಮಾಜ ನಿರ್ಮಾಣ ಮಾಡಲಿಲ್ಲವೇ? ನಿಜವಾಗಿಯೂ ನಿಮಗೆ ನೇತೃತ್ವ ಸಿಗಬೇಕು ಎನ್ನುವುದಾದರೆ ಯಾರ ಬಾಲಂಗೋಚಿಗಳಾಗಬೇಡಿ. ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಿ. ಹೋರಾಟವೆಂದರೆ ಬೀದಿಗಿಳಿಯುವುದೊಂದೆ ಅಲ್ಲ. ನವಭಾರತ ಕನಸಿನ ಕಲ್ಪನೆ ಪ್ರಧಾನಿ ಮೋದಿಯದ್ದಾಗಿರುವುದರಿಂದ ಅದಕ್ಕೆ ತಕ್ಕಂತೆ ಕೆಲಸ ಮಾಡಿ ಎಂದು ಯುವ ಮೋರ್ಚಾಗೆ ಕಿವಿಮಾತು ಹೇಳಿದರು.
ಬಿಜೆಪಿ.ಯುವ ಮೋರ್ಚ ರಾಜ್ಯಾಧ್ಯಕ್ಷ ಡಾ.ಸಂದೀಪ್ ಮಾತನಾಡುತ್ತ ಜಾತಿವಾದ, ವಂಶವಾದ, ಭ್ರಷ್ಟಾಚಾರ, ತುಷ್ಠಿಕರಣದಿಂದ ರಾಜಕೀಯವನ್ನು ಮುಕ್ತಗೊಳಿಸಬೇಕಾಗಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕು ಎಪ್ಪತ್ತು ವರ್ಷಗಳಾಗಿದೆ. ಬೇರೆ ಪಕ್ಷಗಳು ದೇಶವನ್ನು ಅವನತಿಯತ್ತ ತೆಗೆದುಕೊಂಡು ಹೋಗಿವೆ. ಅಮಿತ್‍ಷಾರವರ ಕಲ್ಪನೆಯಂತೆ ದೇಶವನ್ನು ಸ್ವಾವಲಂಭಿ ಬೂತ್‍ನತ್ತ ತೆಗೆದುಕೊಂಡು ಹೋಗುವ ಜವಾಬ್ದಾರಿ ಯುವ ಮೋರ್ಚದ ಮೇಲಿದೆ. ಸದೃಡ ಸಮಾಜ ನಿರ್ಮಾಣದಲ್ಲಿ ಯುವ ಮೋರ್ಚ ಪಾತ್ರವಿದೆ. ಹಾಗಾಗಿ ಕಿಂಚಿತ್ತಾದರೂ ಅಳಿಲು ಸೇವೆ ಸಲ್ಲಿಸಬೇಕೆಂಬ ಆಶವಿಟ್ಟುಕೊಂಡು ರಾಜಕೀಯಕ್ಕೆ ಬರಬೇಕಿದೆ ಎಂದು ತಿಳಿಸಿದರು.
ಸ್ವಾವಲಂಭಿ ಬೂತ್ ರಚನೆಯಾಗಬೇಕಾಗಿರುವುದರಿಂದ ಜನರ ವಿಶ್ವಾಸ ಗಳಿಸಿ ಪಕ್ಷದ ಕಾರ್ಯಕ್ರಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಯುವ ಮೋರ್ಚದ ಮೇಲೆ ಜವಾಬ್ದಾರಿಯಿದೆ. ಅದರ ಮೂಲಕ ಪಕ್ಷದ ಹಿರಿಯರ ಆಶಯಗಳನ್ನು ಈಡೇರಿಸಿ ಎಂದು ಯುವ ಮೋರ್ಚ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಜೆಪಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಅಜೀತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಬಾಳೆಕಾಯಿ, ಮಂಜುನಾಥ್, ರಾಜ್ಯ ಕಾರ್ಯದರ್ಶಿ ಕಿರಣ್, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಓಬಿಸಿ. ರಾಜ್ಯ ಉಪಾಧ್ಯಕ್ಷ ಸಿದ್ದೇಶ್‍ಯಾದವ್, ಜಿಲ್ಲಾ ಸಹ ಪ್ರಭಾರಿ ಶಂಕರಪ್ಪ, ಬಿಜೆಪಿ.ಯುವ ಮೋರ್ಚ ಜಿಲ್ಲಾಧ್ಯಕ್ಷ ಹನುಮಂತೇಗೌಡ ವೇದಿಕೆಯಲ್ಲಿದ್ದರು.